ಕಾರ್ಯಕ್ರಮಗಳು

ಕಾರ್ಯಾಗಾರ, ವಿಚಾರಸಂಕಿರಣ, ಓರಿಯಂಟೇಶನ್ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಹೊಸಬರಿಗೆ ಅನುವಾದದ ತರಬೇತಿ ನೀಡುವುದು, ಮಾಹಿತಿ ಪ್ರಸಾರ ಮಾಡುವುದು ಮತ್ತು ಭಾರತೀಯ ಭಾಷೆಗಳಲ್ಲಿ ಅಸ್ತಿತ್ವದಲ್ಲಿರುವ ಅನುವಾದಿತ ಜ್ಞಾನಪಠ್ಯಗಳ ಮೌಲ್ಯಮಾಪನ ಮಾಡುವುದರ ಮೂಲಕ ರಾಷ್ಟ್ರೀಯ ಅನುವಾದ ಮಿಶನ್ ಅನುವಾದ ಸಂಬಂಧಿ ಶೈಕ್ಷಣಿಕ ಸಂವಾದಗಳನ್ನು ಸುಗಮವಾಗಿಸುತ್ತದೆ. ವಿದ್ವಾಂಸರು, ಅನುವಾದಕರು, ಪರಿಣತರು ಮತ್ತು ಪ್ರಕಾಶಕರನ್ನು ಎನ್‌ಟಿಎಮ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚರ್ಚಿಸಲು ಮತ್ತು ಪರಸ್ಪರ ವ್ಯವಹರಿಸಲು ಆಹ್ವಾನಿಸಲಾಗುತ್ತದೆ.
 
ಕಾರ್ಯಾಗಾರಗಳು
ಎನ್‌ಟಿಎಮ್ 22 ಭಾಷೆಗಳಲ್ಲಿ ಸಂಪಾದಕೀಯ ಸಲಹಾ ತಂಡಗಳ ಕಾರ್ಯಗಳನ್ನು ನಿರ್ವಹಿಸಲು ಕಾರ್ಯಾಗಾರಗಳನ್ನು ನಡೆಸಿ ಪ್ರತಿ ವಿಷಯದ ಪಠ್ಯ ನಿರ್ದಿಷ್ಟ ಪದಕೋಶ ಸಿದ್ಧಪಡಿಸುತ್ತದೆ. ಒಂದು ಪಠ್ಯದ ಅನುವಾದ ಮುಗಿದ ನಂತರ ಪ್ರತಿ ಭಾಷೆಯ ಸಂಪಾದಕೀಯ ಸಲಹಾ ತಂಡ ಅಥವಾ ಆ ತಂಡ ಸೂಚಿಸಿದ ತಜ್ಞರು ಹಸ್ತಪ್ರತಿಗಳ ಪರಿಶೀಲನೆಗೆ ಸಹಾಯ ಮಾಡುವರು. ಹಾಗೆಯೇ ಈ ತಂಡ ಅನುವಾದಕರಿಗೆ ಮಾರ್ಗದರ್ಶನವನ್ನೂ ನೀಡಬಹುದು.
 
ವಿಚಾರಸಂಕಿರಣಗಳು
ರಾಷ್ಟ್ರೀಯ ಅನುವಾದ ಮಿಶನ್ ಅನುವಾದ ಸಂಬಂಧಿ ಶೈಕ್ಷಣಿಕ ವಿಚಾರ ವಿನಿಮಯಗಳನ್ನು ಪ್ರೋತ್ಸಾಹಿಸಲು ವಿಚಾರಸಂಕಿರಣಗಳನ್ನು ನಡೆಸುತ್ತದೆ. ವಿಚಾರಸಂಕಿರಣಗಳಲ್ಲಿ ಮಂಡಿಸಲಾದ ವಿದ್ವತ್ಪೂರ್ಣ ಪ್ರಬಂಧಗಳನ್ನು ಪರಿಶೀಲಿಸಿ ದಾಖಲಿಸಿಕೊಂಡು ಅವುಗಳನ್ನು ಎನ್‌ಟಿಎಮ್ನ ಅರ್ಧವಾರ್ಷಿಕ ನಿಯತಕಾಲಿಕೆಯಾದ ಟ್ರಾನ್ಸ್ಲೇಷನ್ ಟುಡೆಯಲ್ಲಿ ಪ್ರಕಟಿಸಲಾಗುವು. ಈ ವಿಚಾರಸಂಕಿರಣಗಳು ಅನುವಾದ ಸಂಬಂಧಿ ಶೈಕ್ಷಣಿಕ ಚರ್ಚೆಗಳ ಆರ್ಕೈವ್ ನಿರ್ಮಿಸಲು ಎನ್‌ಟಿಎಮ್ಗೆ ಸಹಾಯಮಾಡುತ್ತವೆ. ಇವು ಅನುವಾದ ಅಧ್ಯಯನ ಮತ್ತು ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಸಹಾಯಕವಾಗಬಹುದು
 
ಓರಿಯೆಂಟೇಶನ್ ಕಾರ್ಯಕ್ರಮಗಳು
ರಾಷ್ಟ್ರೀಯ ಅನುವಾದ ಮಿಶನ್ ಅನುವಾದದ ವಿವಿಧ ಆಯಾಮಗಳನ್ನು ಪರಿಚಯಿಸಲು ಮತ್ತು ಸಮರ್ಥ ಅನುವಾದಕರನ್ನಾಗಿ ಮಾಡಲು ಅನುವಾದ, ಅನುವಾದದ ಸಿದ್ಧಾಂತಗಳು ಮತ್ತು ಜ್ಞಾನಪಠ್ಯಗಳ ಅನುವಾದದ ಹಲವಾರು ಸಮಸ್ಯೆಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪರಿಚಯಿಸಲು ವಿವಿಧ ಭಾಷೆಗಳಲ್ಲಿ ಓರಿಯಂಟೇಶನ್ ಕಾರ್ಯಕ್ರಮಗಳನ್ನು ನಡೆಸುತ್ತದೆ. ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇವರು ಬೇರೆ ಬೇರೆ ಭಾಷೆ ಮತ್ತು ಶಿಸ್ತುಗಳ ಹಿನ್ನೆಲೆಯುಳ್ಳಯವರು. ಶಾಲಾ ಕಾಲೇಜು ಶಿಕ್ಷಕರು, ಫ್ರೀಲಾನ್ಸ್ ಅನುವಾದಕರು ಮತ್ತು ವಿಭಿನ್ನ ವೃತ್ತಿಯವರೂ ಕೂಡ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಪಾಲ್ಗೊಳ್ಳುವವರು ಅನುವಾದಕರ ರಾಷ್ಟ್ರೀಯ ನೋಂದಣಿಯಿಂದಲೂ ಸಹ ಆಯ್ಕೆಯಾಗಬಹುದು.

ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಅನುವಾದ ಅಧ್ಯಯನ ಹಾಗು ಸಂಬಂಧಿಸಿದ ವಿಷಯದ ಹಿನ್ನೆಲೆಯವರು ಮತ್ತು/ಅಥವಾ ಭಾರತೀಯ ಭಾಷೆಗಳಲ್ಲಿ ಜ್ಞಾನಪಠ್ಯಗಳ ರಚನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಭಾರತೀಯ ಭಾಷಾ ಬರಹಗಾರರು. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಜ್ಞಾನಪಠ್ಯಗಳನ್ನು ಅನುವಾದ ಮಾಡುತ್ತಿರುವ ಮತ್ತು ಪಾರಿಭಾಷಿಕ ಪದಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ತಜ್ಞರು ಸಹ ಎನ್‌ಟಿಎಮ್‌ನ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಬಹುದು.
 
ಇತರೆ ಕಾರ್ಯಕ್ರಮಗಳು
ತನ್ನ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಅನುವಾದಿತ ಪಠ್ಯಗಳು ಪ್ರಕಟಗೊಂಡ ನಂತರ ದೇಶದಾದ್ಯಂತ ಪುಸ್ತಕ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಎನ್‌ಟಿಎಮ್ ಭಾಗವಹಿಸುತ್ತದೆ. ಲೇಖಕರ ಸಭೆ, ಅನುವಾದಕರ ಸಭೆ ಒಳಗೊಂಡ ಇತ್ಯಾದಿ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನೂ ಎನ್‌ಟಿಎಮ್ ಹಮ್ಮಿಕೊಳ್ಳುತ್ತದೆ.