ನಮ್ಮ ಬಗ್ಗೆ

ರಾಷ್ಟ್ರೀಯ ಅನುವಾದ ಮಿಶನ್ ಭಾರತ ಸರ್ಕಾರದ ಒಂದು ಯೋಜನೆಯಾಗಿದ್ದು ಸಾಮಾನ್ಯವಾಗಿ ಅನುವಾದವನ್ನು ಒಂದು ಉದ್ಯಮನ್ನಾಗಿಸುವುದು ಮತ್ತು ವಿಶೇಷವಾಗಿ ಭಾರತೀಯ ಭಾಷೆಗಳಲ್ಲಿ ಜ್ಞಾನಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಮತ್ತು ವಿದ್ವಾಂಸರಿಗೆ ಲಭ್ಯವಾಗುವಂತೆ ಮಾಡಿ ಆ ಮೂಲಕ ಉನ್ನತ ಶಿಕ್ಷಣಕ್ಕೆ ಸೂಕ್ತ ಒತ್ತಾಸೆ ಒದಗಿಸುವುದು ಇದರ ಉದ್ದೇಶ. ವಿವಿಧ ಭಾಷೆಗಳ ನಡುವಿನ ತೊಡಕುಗಳನ್ನು ನಿವಾರಿಸಿ ಜ್ಞಾನ ಸಮಾಜವನ್ನು ಸೃಷ್ಟಿಸುವುದು ಯೋಜನೆಯ ದೂರದೃಷ್ಟಿಯಾಗಿದ್ದು ಭಾರತ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ನಮೂದಾಗಿರುವ ಎಲ್ಲ ಭಾರತೀಯ ಭಾಷೆಗಳಲ್ಲಿ ಅನುವಾದದ ಮೂಲಕ ಜ್ಞಾನಪ್ರಸಾರವನ್ನು ಮಾಡುವ ಗುರಿಯನ್ನು ರಾಷ್ಟ್ರೀಯ ಅನುವಾದ ಮಿಶನ್ ಹೊಂದಿದೆ.

ಅನುವಾದಕರಿಗೆ ಅನುವಾದ ಕುರಿತು ತರಬೇತಿ ನೀಡುವುದು, ಪ್ರಕಾಶಕರಿಗೆ ಅನುವಾದಿತ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಿಸುವುದು, ಒಂದು ಭಾರತೀಯ ಭಾಷೆಯಿಂದ ಮತ್ತೊಂದು ಭಾರತೀಯ ಭಾಷೆಗೆ ಮತ್ತು ಭಾಷೆಗಳ ನಡುವೆ ಪ್ರಕಟಿತ ಅನುವಾದಿತ ಕೃತಿಗಳ ದತ್ತನಿಧಿಯನ್ನು ರಚಿಸಿ ನಿರ್ವಹಿಸುವುದು ಮತ್ತು ಅನುವಾದದ ಬಗೆಗಿನ ಎಲ್ಲ ಮಾಹಿತಿಗಳ ವಿತರಕ ಕೇಂದ್ರವನ್ನಾಗಿಸುವ ವಿವಿಧ ಪ್ರಯತ್ನಗಳ ಸಂಯೋಜನೆ ಇದಾಗಿದೆ. ಈ ಎಲ್ಲ ಪ್ರಯತ್ನಗಳಿಂದ ಭಾರತದಲ್ಲಿ ಅನುವಾದವನ್ನು ಒಂದು ಉದ್ಯಮವನ್ನಾಗಿ ಸ್ಥಾಪಿಸುವುದು ರಾಷ್ಟ್ರೀಯ ಅನುವಾದ ಮಿಶನ್ನಿನ ಉದ್ದೇಶವಾಗಿದೆ. ಹೊಸ ಹೊಸ ಪಾರಿಭಾಷಿಕ ಪದಗಳನ್ನು ಅಭಿವೃದ್ಧಿಪಡಿಸುವುದಲ್ಲದೆ ಅನುವಾದದ ಮೂಲಕ ಸಂವಾದ ಶೈಲಿಗಳನ್ನು ರೂಪಿಸುವುದರ ಮುಖಾಂತರ ಭಾರತೀಯ ಭಾಷೆಗಳ ಆಧುನೀಕರಣಕ್ಕೂ ಇದು ಸಹಾಯಕವಾಗುವುದೆಂದು ನಿರೀಕ್ಷಿಸಲಾಗಿದೆ. ಆಧುನೀಕರಣ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಭಾರತೀಯ ಭಾಷೆಗಳ ಶೈಕ್ಷಣಿಕ ಸಂವಾದದಲ್ಲಿ ಅನುವಾದಕರು ಅತ್ಯಂತ ಮಹತ್ವದ ಪಾತ್ರವಹಿಸುವರು.

ಅನುವಾದವನ್ನು ಒಂದು ಉದ್ಯಮವನ್ನಾಗಿ ಸ್ಥಾಪಿಸುವ ಗುರಿಯ ಮೊದಲ ಹಂತವೇ ಜ್ಞಾನಪಠ್ಯಗಳ ಅನುವಾದ. ಜ್ಞಾನಪ್ರಸಾರಕ್ಕಾಗಿ ನಿಗದಿಪಡಿಸಿದ ಎಲ್ಲ ಪಠ್ಯಸಾಮಗ್ರಿಗಳು ಒಟ್ಟಾಗಿ ರಾಷ್ಟ್ರೀಯ ಅನುವಾದ ಮಿಶನ್ನಿನ ಜ್ಞಾನಪಠ್ಯಗಳ ಕಾರ್ಪಸ್ ಎನಿಸಿಕೊಳ್ಳುತ್ತವೆ. ರಾಷ್ಟ್ರೀಯ ಅನುವಾದ ಮಿಶನ್ ಪ್ರಸ್ತುತ 22 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಶೈಕ್ಷಣಿಕ ಸಾಮಗ್ರಿಗಳನ್ನು ಅನುವಾದ ಮಾಡುವುದರಲ್ಲಿ ತೊಡಗಿದೆ. ಉನ್ನತ ಶಿಕ್ಷಣಕ್ಕೆ ಉಪಯುಕ್ತವಾಗುವ ಬಹುತೇಕ ಇಂಗ್ಲಿಶಿನಲ್ಲಿ ಲಭ್ಯವಿರುವ ಅಪಾರ ಪಠ್ಯಗಳನ್ನು ಭಾರತೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡುವುದು ರಾಷ್ಟ್ರೀಯ ಅನುವಾದ ಮಿಶನ್ನಿನ ಗುರಿಯಾಗಿದೆ. ಈ ಪ್ರಕ್ರಿಯೆಯು ಅಂತಿಮವಾಗಿ ಒಂದು ಅಂತರ್ಗತ ಜ್ಞಾನಸಮಾಜವನ್ನು ರೂಪಿಸುವುದಕ್ಕೆ ದಾರಿಮಾಡಿಕೊಡುವುದೆಂದು ಅಪೇಕ್ಷಿಸಲಾಗಿದೆ.